ಅಬ್ಬ

ಕಡಲ ಮೊರೆತ ಕಿವಿಗೆ ರಾಚುತ್ತಿತ್ತು.ಪೂಜಾ ಕಾರ್ಯಕ್ರಮಗಳಿಗೆ ನಿಗದಿ ಗೊತ್ತುಪಡಿಸಬೇಕಾದ ‘ಕಾಲ’ದ ಅರಿವು ಹಿರಿಯರಿಬ್ಬರಿಗೆ ಚೆನ್ನಾಗಿಯೇ ಇತ್ತು. ಊರಿನ ಪರಿಚಯಸ್ಥರು ಕೊಟ್ಟಿದ್ದ ವಿಳಾಸದ ಮನೆ ಹುಡುಕುತ್ತಾ ಬ್ರಾಹ್ಮಣರೇ ತುಂಬಿಕೊಂಡಿದ್ದ ಆ ಬೀದಿಯಲ್ಲಿ ನಾನು,ಅಪ್ಪ,ಅಜ್ಜಿ ನಡೆಯತೊಡಗಿದೆವು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ನಮ್ಮನ್ನ್ಯಾರೋ ಹಿಂಬಾಲಿಸುತ್ತಿರುವುದು ಗಮನಕ್ಕೆ ಬಂದಿತ್ತು. ಆಮೇಲೆ ಗೊತ್ತಾಗಿದ್ದು ಹಿಂಬಾಲಿಸುತ್ತಿದ್ದವರು ಪೂಜೆ ಪುನಸ್ಕಾರಗಳನ್ನೆ ವ್ಯಾಪಾರ ಮಾಡಿಕೊಂಡಿದ್ದ ಭಟ್ಟಂಗಿಗಳು; ಹಾಗಂತ ಅಪ್ಪನಿಗೆ ಹೇಳಿಯೂ ಬಿಟ್ಟೆ. ‘ಶ್’, ಸುಮ್ಮನಿರಪ್ಪ ಕ್ರಾಂತಿಕಾರಿ, ಅವರೆಲ್ಲಾ ಪಾಪದ ಭಟ್ರುಗಳು ಅಂದ್ರು.ಅವರ ಜುಟ್ಟುಗಳನ್ನು ನೋಡಿ ‘ಅಬ್ಬ’ ಹೇಳುತ್ತಿದ್ದ ಚಾಣಕ್ಯನ ಕಥೆ,ಟಿವಿಯಲ್ಲಿ ಬರುತ್ತಿದ್ದ ‘ಚಾಣಕ್ಯ’ ಸೀರಿಯಲ್ ನೆನಪಾಗಿ, ಅದನ್ನೇ ನೋಡುತ್ತಾ ನಡೆಯುತ್ತಿದ್ದೆ.ನನ್ನನ್ನು ನೋಡಿ ಅಜ್ಜಿ ಯಾಕೋ ಮುಸು ನಗುತ್ತಿದ್ದಳು.ನಮ್ಮ ಕೈಯಲ್ಲಿ ಊರವರು ಕೊಟ್ಟ ‘ರಾಮಭಟ್ರ’ ವಿಳಾಸ ಇದ್ದ ಕಾರಣ ಭಟ್ಟಂಗಿಗಳ ವ್ಯಾಪಾರ ಕುದುರಲಿಲ್ಲ.

ಹೇಗೋ ದೇವವ್ಯಾಪಾರಿಗಳ ಕಿರಿಕಿರಿಯನ್ನು ತಪ್ಪಿಸಿಕೊಂಡು ನಾವು ರಾಮಭಟ್ರ ವಿಳಾಸ ಪತ್ತೆಹಚ್ಚಿದೆವು. ಪೂಜೆಯ ಸಮಯ ಗೊತ್ತುಪಡಿಸಿಕೊಂಡು, ಸ್ನಾನ ಮಾಡಿ, ಕಡಲು ನೋಡಿ ಬರಲೆಂದು ಹೊರಟೆವು. ಕಡಲ ತಡಿ ತಲುಪುತ್ತಲೇ ಮೀನಿನ ವಾಸನೆ ಮೂಗಿಗಡರಿತ್ತು.ಕಪ್ಪು ಬಣ್ಣದ ಹತ್ತಾರು ದೋಣಿಗಳು ತೀರದ ಮೂಲೆಗಳಲ್ಲಿ ವಿಶ್ರಾಂತಿಯಲ್ಲಿದ್ದವು.ಅಲ್ಲಲ್ಲಿ ತುಂಡು ತುಂಡಾದ ಬಲೆಗಳು ಚೆಲ್ಲಿಕೊಂಡಿದ್ದು,ಕೆಲವು ಮಕ್ಕಳು ಚೆಲ್ಲಾಟವಾಡುತ್ತಿದ್ದರು.ಅಪ್ಪ ಪ್ಯಾಂಟ್ ಮಡಚಿ ಚಪ್ಪಲಿ ಕೈಯಲ್ಲಿ ಹಿಡಿದು ಹೆಜ್ಜೆಹಾಕುತ್ತಿದ್ದ.ಕಡಲನ್ನೊಮ್ಮೆ, ಆಕಾಶವನ್ನೊಮ್ಮೆ ನೋಡುತ್ತಾ ವಿಷಣ್ಣಳಾಗಿದ್ದ ಅಜ್ಜಿ ನನ್ನನ್ನು ಕರೆದು, ಅದೋ ನೋಡಲ್ಲಿ ಕಡಲ ಅಲೆಗಳು ‘ಅಬ್ಬ’ ಅಪರೂಪಕ್ಕೆ ಉಡುತ್ತಿದ್ದ.ಒಯಿಲ್ ಸೀರೆಯ ನೆರಿಗೆಗಳಂತೆ ಕಾಣಿಸ್ತಿಲ್ವ ನೋಡು ಅಂದ್ಲು.ನನಗೋ, ಅಬ್ಬ ಎರಡೂ ಕೈ ಮುಂದೆ ಮಾಡಿ ಕರೆಯುವ ದೃಶ್ಯದಂತೆ ತೋರುತ್ತಿದ್ದವು ಆ ಅಲೆಗಳು.ಅಲೆಗಳು ಪಾದ ಸೋಕಿ, ನೊರೆ ಇಂಗುತ್ತಿರುವಾಗಲೆ ‘ನಾದ’ಳ ಕಾಲ್ ಬಂತು. ಕಾಲಿಗಂಟಿದ್ದ ಮರಳು,ಮನಸ್ಸಿಗಂಟಿದ್ದ ನೆನಪ ಕೊಡೆಯುತ್ತಲೇ ಮೊಬೈಲ್ ಕಿವಿಗಿಟ್ಟುಕೊಂಡೆ.

ಕಿವಿಗಿಡುತ್ತಲೇ ‘ಟಪ್ ಟಪ್’ ಸದ್ದು.ಆವತ್ತೊಂದು ದಿನ ಹಂಪೆಗೆ ಹೋಗಿದ್ದಾಗ, ಅಲ್ಲಿನ ಸೆಕ್ಯೂರಿಟಿ ಗಾರ್ಡ್ ೨೦ ರೂಪಾಯಿ ಲಂಚ ತಗೊಂಡು ಅಲ್ಲಿನ ಸಂಗೀತ ಹೊಮ್ಮಿಸುವ ಕಂಬಗಳನ್ನು ಅರ್ಧಂಬರ್ಧ ಬಾರಿಸಿ ಕೇಳಿಸಿದ್ದ.ಅವಳ ಹೆಸರಿಗೆ ಅನ್ವರ್ಥವೆಂಬಂತೆ ಆವಾಗಿಂದ ಹೋದಲ್ಲೆಲ್ಲಾ ಕಂಬದಲ್ಲಿ ನಾದ ಹೊಮ್ಮಿಸುವ ಹುಚ್ಚು ಅವಳಿಗೆ. ಅವಳು ಮೂಡಬಿದಿರೆಯ ಸಾವಿರಕಂಬದ ಬಸದಿಯಿಂದ ಕಾಲ್ ಮಾಡಿದ್ಲು. ಕಳೆದ ವರ್ಷ ಇದೇ ದಿನ ಅವಳನ್ನು ಮಡಿಲಲ್ಲಿ ಮಲಗಿಸಿಕೊಂಡು ‘ಅಬ್ಬ’ ಸಣ್ಣಂದಿನಲ್ಲಿ ನನಗೆ ಹೇಳಿದ “ಸಾವಿರ ಕಂಬದಲ್ಲಿ ಬಂದಿಯಾದ ಸಾವಿರ ರಾಜಕುಮಾರಿಯರ” ಕಥೆಯನ್ನು ಹೇಳಿದ್ದೆ.ಇವತ್ತು ಅಬ್ಬನನ್ನು ಹುಡುಕುತ್ತಾ ಅಬ್ಬನ ಹುಟ್ಟೂರಾದ ಮೂಡಬಿದಿರೆಗೆ ಹೊರಟಿದ್ಲು ಅಲೆಮಾರಿ ಹುಡುಗಿ.ನಾನೋ ಅಬ್ಬನನ್ನು ಹುಡುಕುವ ಕೊನೆಯ ಪ್ರಯತ್ನವೆಂಬಂತೆ ಅಬ್ಬ ಮತ್ತೆ ಮತ್ತೆ ಹೇಳತ್ತಿದ್ದ ರಾವಣನ ತಪಸ್ಸಿನ ಕಥೆಯಲ್ಲಿ ಬರುವ ,ರಾವಣನಿಂದ ಸ್ಥಾಪಿಸಲ್ಪಟ್ಟು ಗೋವಿನ ಕಿವಿಯಾಕರದ ಶಿವಲಿಂಗವಿರುವ, ಅವಳಿಗೆ ಪ್ರಿಯವಾದ “ಗೋಕರ್ಣ”ಕ್ಕೆ ಬಂದಿದ್ದೆ. ನನ್ನ ಪೂರ್ವಜರೆಲ್ಲ ಅಲ್ಲಿಯೇ ಹೋಗಿ ನೆಲೆಸಿದ್ದಾರೆ ಅಂದಿದ್ಲು ಅಬ್ಬ. ಅಬ್ಬ ನನಗೆ ಹೇಳಿಕೊಟ್ಟು, ನಾನು ಅವಳಿಗೆ ಹೇಳಿಕೊಡುತ್ತಿದ್ದ ಕಥೆಯ ಮೂಲಕ ‘ಅಬ್ಬ’ ನಾದಲೊಳಗೂ ಇಳಿದಿದ್ದಳು. ಅಬ್ಬನನ್ನೂ,ಅವಳ ಕಥೆಗಳನ್ನೂ ಹುಡುಕುತ್ತಾ ನಾವಿಬ್ಬರೂ ತುಂಬಾ ಅಲೆದಿದ್ದೆವು. ಅಲೆಯುತ್ತಲೇ ಬದುಕಿದೆವು,ಬದುಕಲು ಕಲಿತೆವು,ಮನುಷ್ಯರಾದೆವು. ಕಾಲೇಜು ಬಿಟ್ಟ ಆಸುಪಾಸಿನ ದಿನಗಳಲ್ಲಿ ಪರಿಚಿತಳಾದ ನಾದ ಜೊತೆಯಾಗಿ ಕೆಲವು ವರ್ಷಗಳೇ ಆದರೂ, ನಮ್ಮ ನಡುವಿನ ಮಗುತನ ಮುಗಿಯತ್ತಲೇ ಇರಲಿಲ್ಲ.ಬೇರೆ ಬೇರೆ ದಾರಿಯಲ್ಲಿ ಸಾಗುತ್ತಲೇ ಪ್ರೇಮ ಸಂಧಿಸುತ್ತಲೇ ಇತ್ತು. ನನ್ನ ಅಲೆದಾಟಗಳ ಆರಂಭವು ಅವಳ ಪರಿಚಯದೊಂದಿಗೆ ಶುರುವಾಗಿತ್ತು.ವರ್ಷಗಳ ಹಿಂದಿನ, ಆ ದಿನ , ಆ ರಾತ್ರಿ ಅವಳೊಂದಿಗೆ ಪ್ರಥಮ ಭಾರಿಗೆ ಸುಖಿಸಿದ್ದೆ. ಮರುದಿನ ಊರಲ್ಲಿದ್ದೆ.

ಆ ಸಂಜೆ, ಊರ ಜಾತ್ರೆಯ ಕೊನೆಯ ದಿನ. ತೇರು ಎಳೆಯುವ ರಾತ್ರಿ. ದೇವಸ್ಥಾನದಿಂದ ೨ ಮೈಲು ದೂರದ ಜಾಗದಲ್ಲಿ ಸುತ್ತಮುತ್ತ ಕಪ್ಪು-ಬೂದು ಬಣ್ಣಕ್ಕೆ ತಿರುಗಿರುವ ಒಣಗಿದ ಎಲೆ-ಮರಗಳು,ಅನತಿ ದೂರದಲ್ಲಿ ಕೆಲವು ಹಂಚಿನ ಮನೆಗಳು,ಅದಕ್ಕಿಂತ ಆಚೆ ಅವತ್ತು ದೇವಸ್ಥಾನ ಭಂಡಾರ ಕಟ್ಟೆಗೆ ಬರಬೇಕಾದ ಭಂಡಾರದ ಸದ್ದು ಕೇಳಿಸುತ್ತಿತ್ತು.ಆ ಸ್ಥಳ ಜಗತ್ತಿನ ಅತಿ ಪ್ರಶಾಂತ ಸ್ಥಳವಾಗಿಯೂ, ಕೆಲವೊಮ್ಮೆ ಹಳೇ ಮದುವೆಗಳ ಅಡುಗೆ ಮನೆಯಂತೆಯೂ ಭಾಸವಾಗುತ್ತಿತ್ತು. ಅಂತಹ ಜಾಗದಲ್ಲಿ ಕೂತು , ಬೋಳು ಮರಗಳು ಮತ್ತು ಲೈಟುಕಂಬದ ಮೇಲೆ ಕೂತ ಕಾಗೆಗಳ ಕೂಗ ಕೇಳಿದ ಮಧ್ಯವಯಸ್ಕ ಗುಂಪೊಂದು ತಮ್ಮತಮ್ಮಲ್ಲೇ ಮಾತಾಡಿಕೊಳ್ಳತ್ತಾ ಬೆಂಕಿ ಕಾಯಿಸಿಕೊಳ್ಳತ್ತಿದ್ದರು. ಹಿರಿತಲೆಗಳು ಅದೇನೋ ಗಂಭೀರ ಭಾಷಣವೆಂಬಂತೆ ಗತಕಾಲದ ಸುಂದರಿಯೊಬ್ಬಳ ಬಗ್ಗೆ ತಮ್ಮ ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದರು.ಕಷ್ಟಪಟ್ಟು, ಮುಖದಲ್ಲಿ ವಿಷಾದ ಭಾವ ಧರಿಸಿದ್ದ ಹೊಸತಲೆಮಾರು.ಇವರೆಲ್ಲರ ಮಧ್ಯೆ ಬೆಳಕಿನಂತ ಒಬ್ಬಳೇ ಹೆಣ್ಣು .ಇವೆಲ್ಲವನ್ನೂ ನೋಡುತ್ತಾ ಮನಸ್ಸು ಕಳವಳಗೊಂಡು ಜಾತ್ರೆ ಯ ಆ ಬೀದಿಯಲ್ಲೇ ಮನೆ ಕಡೆ ಹೆಜ್ಜೆಹಾಕಿದೆ. ರಥಬೀದಿ ತುಂಬಿ ತುಳುಕುತ್ತಿತ್ತು.ಅಬ್ಬನ ಬೆರಳು ಹಿಡಿದು ಜಾತ್ರೆ ಸುತ್ತುತ್ತಿದ್ದದ್ದು, ಬುಗ್ಗೆ,ಖರ್ಜೂರ,ಕಡ್ಲೆಮಿಠಾಯಿಗೆ ಹಠ ಹಿಡಿಯುತ್ತಿದ್ದು ನೆನಪಾಗುತ್ತಿತ್ತು.ಅದೇ ಜಾತ್ರೆಯಲ್ಲೇ ಮೊದಲ ಬಾರಿಗೆ ಮಹಾಭಾರತ ಪುಸ್ತಕ ಖರೀದಿಸಿ ಕೊಟ್ಟಿದ್ದಳು ಅಬ್ಬ. ಮುಂದೆ ಮಹಾಭಾರತದ ಎಲ್ಲಾ ಪರ್ವಗಳನ್ನು ಅದೆಷ್ಟು ಬಾರಿ ಓದಿ ಹೇಳಿದ್ದೀನೋ, ಅಬ್ಬನಿಗೆ..! ಆ ಎಲ್ಲಾ ನೆನಪ ಓಣಿಯಲ್ಲಿ ನಡೆಯುತ್ತಾ ಮನೆ ತಲುಪಿದ್ದೆ.

ವಾರದ ಹಿಂದಷ್ಟೇ ಒಕ್ಕಲಾದ ಹೊಸ ಮನೆ.ಹಳೆ ಮನೆ ಕೆಡವಿದಾಗಿನಿಂದ ಮೌನವಾಗಿದ್ದ ಅಬ್ಬ ,ಇವತ್ತು ಬೆಳಗಿನ ಜಾವ ಎಲ್ಲರೂ ಏಳುವುದಕ್ಕಿಂತ ಮೊದಲೇ ಹೊರಟು ಹೋಗಿದ್ದಳು.ಒಳಗೆ ಅಮ್ಮ, ಅಜ್ಜಿಯ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಉಳಿದ ಹೆಂಗಸರು ಮಾತಿನಲ್ಲೇ ಹೊಸಮನೆಯ ತೂಕ ಮಾಡುತ್ತಿದ್ದರು.ಹಳೇ ಮನೆಯನ್ನೂ, ಹೊಸ ಮನೆ ಕಟ್ಟಲಾಗದ ಅಪ್ಪನನ್ನೂ ಮೂದಲಿಸುತ್ತಿದ್ದ ಅದೇ ಮಂದಿ, ಇದೀಗ ಹೊಸಮನೆಯಲ್ಲಿ ಕುಳಿತು ಹಳೆ ಮನೆಯನ್ನು,ಅದರೊಂದಿಗಿನ ನೆನಪನ್ನು,ಅದರ ಪುರಾತನ ಸೌಂದರ್ಯವನ್ನೂ ಹೊಗಳುತ್ತಿದ್ದರು. “ಹಳೇ ಮನೆ ಮತ್ತು ಅಬ್ಬ” ಎರಡರ ಬಗೆಗಿನ ಅವರುಗಳ ಮಾತು ಒಂದನ್ನೇ ಉದ್ದೇಶಿಸಿ ಹೇಳುವಂತೆ ಕೇಳಿಸುತ್ತಿತ್ತು ನನಗೆ.

ಮಂಗಳೂರಿನ ಶ್ರೀಮಂತ ಕೊಂಕಣಿಗಳ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದ ಅಬ್ಬ ವರಸೆಯಲ್ಲಿ ಅಜ್ಜಿಗೆ ಅತ್ತೆಯಂತೆ. ಪ್ರೈಮರಿಯಲ್ಲಿದ್ದಾಗ ರಜಾದಿನಗಳಲ್ಲಿ ಅವಳಿರುವಲ್ಲಿಗೆ ಹೋಗುತ್ತಿದ್ದ ನಾನು ರಜಾ ದಿನಗಳನ್ನು ಅವಳ ಜೊತೆ ಕಳೆಯುತ್ತಿದ್ದೆ.ಅಲ್ಲಿ ಹಳೇ ವಸ್ತುಗಳನ್ನು ಇಡುತ್ತಿದ್ದ store ರೂಮ್ ಅಬ್ಬನಿಗೆ ಕೆಲಸವಿಲ್ಲದ ಸಮಯದ ವಿಶ್ರಾಂತಿಯ ಕೋಣೆಯಾಗಿತ್ತು.ಆ ರೂಂ, ಅಲ್ಲಿದ್ದ ಹಳೇ ವೀಣೆ,ಹಾಳಾದ ಮರದ ಕಿಟಕಿಗಳು,ಅಲ್ಯುಮಿನಿಯಂ ಪಾತ್ರೆಗಳು, ಎಲ್ಲವೂ ಒಂದು ಪ್ರತ್ಯೇಕವಾದ ಲೋಕವನ್ನೇ ಸೃಷ್ಟಿಸಿತ್ತು.ನಾನಲ್ಲಿರುವಾಗ ಅಬ್ಬ ಮತ್ತು ನಾನು ದೊಡ್ಡದಾದ ಒಂದೇ ತಟ್ಟೆಯಲ್ಲಿ ಊಟ ಮಾಡ್ತಿದ್ವಿ.ಆ ಬಟ್ಟಲು ಈಗ ಅಬ್ಬನ ಹಳೇ ಟ್ರಂಕಿನೊಳಗೆ ಅಟ್ಟದ ಮೇಲೆ ಬಿದ್ದಿದೆ. ಒಂದು ಕಾಲದಲ್ಲಿ ಅಬ್ಬನಿಗೂ ಮದುವೆಯಾಗಿತ್ತು,ಆಸ್ತಿಪಾಸ್ತಿಗಳಿದ್ದವಂತೆ. ಗಂಡ ಮತ್ತು ಕುಟುಂಬದ ತಾತ್ಸರದ ವಿರುದ್ಧ ಸಿಡಿದೆದ್ದ ಎಳೆ ಹುಡುಗಿ ಮಂಗಳೂರಿಗೆ ಬಂದು ಬದುಕು ಕಟ್ಡಿಕೊಂಡದ್ದು, ಗಂಡ ತೀರಿಕೊಂಡು ಮಕ್ಕಳನ್ನು ಬೆಳೆಸಲು ಒದ್ದಾಡುತ್ತಿದ್ದ ತನಗೆ ಬೆಂಬಲವಾಗಿ ನಿಂತದ್ದನ್ನು ಅಜ್ಜಿ ಹೇಳಿದ್ದರು.”ನಿನ್ನ ಅಪ್ಪ-ಅಮ್ಮನನ್ನು ಒಂದುಗೂಡಿಸಿದ್ದು ನಿನ್ನಮ್ಮನ ಖಾಯಿಲೆಯ ಕಾಲದಲ್ಲಿ ನಿಮ್ಮನ್ನೆಲ್ಲಾ ಪೊರೆದದ್ದು ಅವಳೇ ಕಣೋ” ಅಂತ ಅಬ್ಬ ಇಲ್ಲದಿರುವಾಗ ಪದೇ ಅನ್ನುತ್ತಿದ್ದಳು ಅಜ್ಜಿ. ಅಬ್ಬನಿಗೆ ಇವೆಲ್ಲ ಇಷ್ಟವಾಗಿತ್ತಿದ್ದಿಲ್ಲ. ಅಬ್ಬ ನನ್ನನ್ನು ಅವಳ ಸಂಬಂಧಿಕರ ವೈಭವದ ಮನೆಗೆ ಕರೆದುಕೊಂಡು ಹೋಗಿದ್ದು,ಅಲ್ಲಿ ಅವಳಿಗೆ ಸಿಕ್ಕ ಮರ್ಯಾದೆ,ಗೌರವಗಳು ನೆನಪಿತ್ತು ನನಗೆ. ಅಷ್ಟೊಂದು ಸಿರಿವಂತ ಬಂಧುಗಳಿದ್ದು ಅಬ್ಬ ಯಾಕೆ ಮನೆಕೆಲಸ ಮಾಡುತ್ತಿದ್ದಳು ಎಂಬುದು ಆವತ್ತಿಗೆ ನನಗೆ ಸೋಜಿಗವಾಗಿತ್ತು.ಆದರೆ ಇಡೀ ಕುಟುಂಬವನ್ನೇ ಎದುರುಹಾಕಿಕೊಂಡು, ತನ್ನೆಲ್ಲಾ ಕಲ್ಪಿತ ಬದುಕಿನ ಪೊರೆಕಳಚಿ, ಇಷ್ಟವಾಗದ ಗಂಡನಿಂದ ಬೇರೆಯಾದ ನಾದ ಜೊತೆಯಾದ ಮೇಲೆ ಅಬ್ಬ ಇನ್ನಷ್ಟು ಅರ್ಥವಾಗಿದ್ದಳು.

ಆಲೋಚನೆಯಲ್ಲೇ ಮುಳುಗಿದ್ದೆ. ಅಜ್ಜಿ ಬಿಕ್ಕುತ್ತಿದ್ದುದು ಕೇಳಿಸಿತು,ಅಮ್ಮ ಸಮಾಧಾನ ಮಾಡುತ್ತಿದ್ದಳು. ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ .ಹೊಸ ಮನೆ ಆದ ಮೇಲೆ ಅದೇ ಕೋಣೆಯಲ್ಲಿ ಮಲಗುತ್ತಿದ್ದಳು ಅಬ್ಬ.ಹಳೇ ಮನೆಯಿಂದ ಸರಿಗೆ ಸಮೇತ ಎತ್ತಿಟ್ಟುಕೊಂಡಿದ್ದ ಹಳೇ ತಿಳಿನೀಲಿ ಬಣ್ಣಗಳ ಪತ್ರಗಳ ಗೊಂಚಲನ್ನು ಕೋಣೆಯ ಮೂಲೆಗೆ ಬಣ್ಣದ ಕವರ್ ಹಾಕಿ ನೇತು ಹಾಕಿದ್ದಿದ್ದು ಕಾಣುತ್ತಿತ್ತು.ಕಿಟಕಿಯ ಸಂದಿಯಲ್ಲಿದ್ದ ನಶ್ಯದ ಡಬ್ಬಗಳು ಅಣಕಿಸುತ್ತಿದ್ದವು. ಏನನ್ನಿಸಿತೋ ಏನೋ! ಅಬ್ಬನಿಗೊಂದು ಪತ್ರ ಬರೆಯಲು ಹೊರಟೆ.ನೆನಪಾದದ್ದನ್ನೆಲ್ಲಾ ಬರೆಯತೊಡಗಿದೆ. ಅವಳು ಹೇಳತ್ತಿದ್ದ ಕಥೆಗಳ ಬಗ್ಗೆ,ನಮ್ಮ ಕೆನ್ನೆಗಂಟಿದ ಅವಳ ನಶ್ಯದುಸಿರಿನ ಘಮದ ಬಗ್ಗೆ,ಪ್ರತಿರಾತ್ರಿ ಮಲಗುವಾಗ ಕೃಷ್ಣಾರ್ಪಣ ಅನ್ನುತ್ತಿದ್ದುದನ್ನು ನಾನೀಗ ನಿಲ್ಲಿಸಿದ್ದೇನೆ ಅನ್ನುವುದರ ಬಗ್ಗೆ,ಬೆಳಿಗ್ಗೆ ಬಲಗಡೆಯಿಂದಾನೆ ಏಳ್ಬೇಕು ಅನ್ನುವುದರ ಕುರಿತು ನನಗೀಗ ನಂಬಿಕೆ ಉಳಿದಿಲ್ಲ ಎನ್ನುವುದರ ಬಗ್ಗೆ,ಹಂಚಿತಿನ್ನುವುದನ್ನು ನಾನೀಗ ಅಲ್ಪಸ್ವಲ್ಪ ಪಾಲಿಸುತ್ತೀದ್ದೇನೆ ಅನ್ನುವ ಬಗ್ಗೆ..

ಹೀಗೆ ತನ್ನದೇ ಲೋಕದಲ್ಲಿ ಮುಳಗಿದ್ದವನಿಗೆ ಹೊರಗಡೆ ಗಂಡಸರು ಮಾತಾಡೋದು ಕೇಳಿಸಿತ್ತು.ಯಾರೋ, ಪೂರ್ತಿ ಉರಿಯಲು 4-5 ಗಂಟೆ ಬೇಕಾಗಬಹುದು.ಕೆಲವೊಮ್ಮೆ ಸೊರಗಿದ ದೇಹವಾಗಿದ್ದು, ಒಣಗಿದ ‘ಜಾತಿ’ ಸೌದೆಯಾಗಿದ್ದರೆ 2 ಗಂಟೆ ಕೂಡ ಸಾಕು ಅಂದಿದ್ದು ಕೇಳಿಸಿತು.ತೋಚಿದಂತೆ ಬರೆದ ಪತ್ರವನ್ನು ಎತ್ತಿಕೊಂಡು ಮನೆಯಿಂದ ಹೊರಟೆ. ತಡರಾತ್ರಿ ತಂಗಿ ಕೂಡ ಬರುತ್ತೇನೆಂದಳು, ಅಪ್ಪನ ಕಡೆ ನೋಡಿದೆ. ಹುಡುಗರು ರಾತ್ರಿ ಹೋಗೋದಿಕ್ಕೇನು ತಡಸವಿರಲಿಲ್ಲ. “ಹೆಣ್ಣಿಗೆ ಸ್ವಲ್ಪ ಕಡಿವಾಣವಿರುವುದು ಒಳ್ಳೆಯದೇ”, ಯಾರೋ ಪಿಸುಗುಟ್ಟಿದ್ದರು.ಒಂದ್ಸೊಲ್ಪ ಸುಳ್ಳು ಹೇಳಿಯಾದರೂ ತನಗಿಷ್ಟ ಬಂದ ರೀತಿಯಲ್ಲೇ ಬದುಕಲಿಚ್ಛಿಸುತ್ತಿದ್ದ ತಂಗಿ ಅವತ್ತು ಮುಟ್ಟಾಗಿದ್ದು ಅದೇಗೊ ಗೊತ್ತಾಗಿತ್ತು. ಭಂಡಾರ ಬರುವ ಸಮಯ ನೀನೊಬ್ನೆ ಹೋಗು ಅಂದ್ರು ಅಪ್ಪ.

ಮತ್ತೆ ಜಾತ್ರೆಯ ನಡುವಲ್ಲಿಯೇ ನಡೆದೆ.ರಥಬೀದಿಯಲ್ಲಿ ತೇರೆಳೆಯುತ್ತಿದ್ದರು. ತೇರಲ್ಲಿ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದರು.”ರೋಷವೇಷದಿಂದ ಬರಿಗಾಲಲ್ಲಿ ತೇರೆಳೆಯುತ್ತಿದ್ದ ಜನ,ರಥದಿಂದುರಿದ ಹೂಗಳೊಂದಿಗೆ ಚಲ್ಲಾಪಿಲ್ಲಿಯಾದ ಚಪ್ಪಲಿಗಳು, ಅಳುತ್ತಿರುವ ಮಕ್ಕಳ ನಿಭಾಯಿಸುತ್ತಲೇ ಕೈಮುಗಿದು ‘ಚಾಮಿ ಚಾಮಿ’ ಎನ್ನುತ್ತಿದ್ದ ಅಮ್ಮಂದಿರು”. ಈ ಎಲ್ಲರಿಗಿಂತ ಅಬ್ಬ ಯಾಕೆ ಭಿನ್ನ ಅನ್ನಿಸುತ್ತಿದ್ದಳು..! ಗೊತ್ತಿಲ್ಲ.ನನಗ್ಯಾಕೆ ದೇವರು ಬೇಡವಾಗಿದ್ದಾನೆ ಮತ್ತು ಪ್ರೀತಿಯೇ ಸರ್ವಸ್ವ ಅನಿಸುತ್ತಿದೆ ಅನ್ನೋದು ಮಾತ್ರ ಅರ್ಥವಾಗಿತ್ತು. ನಡೆದು ನಡೆದು ಮತ್ತದೇ ಜಾಗಕ್ಕೆ ತಲುಪಿದ್ದೆ.ಕೆಲವಾರು ಗಂಡಸರ ಮಧ್ಯೆ ಬೆಳಗಿ ಉರಿಯುತ್ತಿದ್ದ ಆ ಹೆಂಗಸಿದ್ದ ಜಾಗಕ್ಕೆ.ಈವಾಗದು ಜಗತ್ತಿನ ಅತೀ ಪ್ರಶಾಂತವಾದ ಜಾಗವಾಗಿತ್ತು. ಸ್ಮಶಾನವನ್ನು ಮೌನ ಆವರಿಸಿಕೊಂಡಿತ್ತು.ಅಬ್ಬ ಉರಿದು ಹೋಗಿದ್ದಳು.ಕೆಂಡದ ತುಣುಕುಗಳಷ್ಟೇ ಬಾಕಿ ಉಳಿದಿದ್ದವು. ಮಡಚಿಟ್ಟುಕೊಂಡಿದ್ದ ಅಬ್ಬನಿಗೆಂದು ಬರೆದ ಪತ್ರವನ್ನು ಕೆಂಡದಲ್ಲಿ ಹಾಕಿ, ಅಬ್ಬ ಅನ್ನುತ್ತಿದ್ದ ಮಾತುಗಳು ನೆನಪಾಗಿ ಕೃಷ್ಣಾರ್ಪಣ ಅಂದೆ. ಹಾರಾಡುತ್ತಿದ್ದ ಕೊನೆಯ ಬೆಂಕಿ ಕಿಡಿಗಳು ಮತ್ತು ಹೊಗೆಯ ನಡುವಿಂದ ಎಂದಿನಂತೆ ತನ್ನೆರಡು ಕೈಗಳನ್ನು ಉದ್ದಕ್ಕೆ ಚಾಚಿ ‘ಬಾ ಬಾ ‘ಎಂದು ಕರೆಯುತ್ತಿದ್ದಳು ಅಬ್ಬ. ಇವತ್ತಿಗೂ ಕರೆಯುತ್ತಾಳೆ ನನ್ನೊಳಗಿನ ಕಿಡಿಯಾಗಿ,ಅಲೆಯಾಗಿ, ಒಲವಿನ ಕೇಂದ್ರ ಬಿಂದುವಾಗಿದೆ..

ಇಂದಿಗೆ ಸರಿಯಾಗಿ ಏಳು ವರ್ಷಗಾಳಾಗಿತ್ತು. ಅಬ್ಬನ ಮೂಳೆಗಳನ್ನು ಕಟ್ಟಿದ್ದ ತೆಂಗಿನ ಮರ ಕಾಯಿಬಿಡೋದು ನಿಲ್ಲಿಸಿತ್ತು. ಕಡಲ ನೋಡುತ್ತಾ ನಿಂತಿದ್ದ ಅಜ್ಜಿ,ಅಪ್ಪ,ನಾನು ರೂಮಿಗೆ ಹೊರಟು, ಬೆಳಿಗ್ಗೆ ಬೇಗನೆ ಎದ್ದು ರಾಮಭಟ್ಟರೊಂದಿಗೆ ಪಿಂಡ ಬಿಡುವ ಕಾರ್ಯ ಮುಗಿಸಿ ಊರಿಗೆ ಹೊರಟು ಬಂದೆವು.ಅಸಂಬದ್ಧವೆಂದು ನಂಬದೇ ಇದ್ದ ಕ್ರಿಯೆಗಳೆಲ್ಲವನ್ನೂ ಅಬ್ಬನೆಂಬ ಪ್ರೇಮಮಯಿಗೋಸ್ಕರ ಮಾಡಬೇಕಾಗಿ ಬಂದುದನ್ನು ನೆನೆಸಿಕೊಂಡು ಕಣ್ಣು ಮುಚ್ಚಿದೆ.ದಾರಿ ಗೋಚರಿಸುತ್ತಿತ್ತು.
ಆ ಒಳರಸ್ತೆಗಳಲ್ಲಿ ನನ್ನ ಕೈ ಹಿಡಿದುಕೊಂಡು ಆಕೆ ನಡೆಯುತ್ತಿದ್ದಳು. ಸುತ್ತಮುತ್ತಲಿನ ದೊಡ್ಡ ದೊಡ್ಡ ಮನೆಗಳನ್ನು ನಾನು ಆಶ್ಚರ್ಯದಿಂದ ನೋಡುತ್ತಿದ್ದೆ. “ನೀ ದೊಡ್ಡವನಾಗಿ ದೊಡ್ಡ ಆಫೀಸರಾದ ಮೇಲೆ ನೀನು ಅಷ್ಟು ದೊಡ್ಡ ಮನೆ ಕಟ್ಟಿಸ್ತೀಯ” ಎಂದು ಬೀಸಿಕೊಂಡು ಹೋಗುತ್ತಿದ್ದ ನನ್ನ ಕೈಯನ್ನು ಅವಳ ಮುಷ್ಟಿಯೊಳಗಿಟ್ಟುಕೊಂಡು ನಡೆಯುತ್ತಲೇ ಇದ್ದಳು. ಅಲ್ಲೆಲ್ಲೋ ಗುರ್ತದ ಗೂಡಂಗಡಿಯಲ್ಲಿ ಚಿಕ್ಕಿ(ಕಡ್ಲೆಯಿಂದ ಮಾಡಿದ ಮಿಠಾಯಿ) ತಗೊಂಡು ತಿನ್ನಲು ಕೊಟ್ಟಳು. ಮತ್ತಿನ್ನೆಲ್ಲೋ ಕಂಪೋಂಡಿನಾಚೆ ಇಣುಕಿ ನೋಡುತ್ತಿದ್ದ ನುಗ್ಗೇಕಾಯಿ ಕೊಯ್ದು ತನ್ನ ಬ್ಯಾಗಲ್ಲಿಟ್ಟುಕೊಂಡು ನನ್ನ ನೋಡಿ ಕಣ್ಣು ಹೊಡೆದಳು ಅಬ್ಬ.ಹಾಗೆಯೇ ನಡೆಯುತ್ತಿದ್ದೆವು ನಾನು ಮತ್ತು ನನ್ನ ಪ್ರೀತಿಯ ಅಬ್ಬ. ನಡೆದು ಸುಸ್ತಾದಾಗ ರಸ್ತೆಬದಿಯ ಸೈಕಲ್ ಗಾಡಿಯಿಂದ ಅಬ್ಬ ಗೋಳಿಸೋಡ ಕುಡಿಸಿ, ನಂತರ ರಸ್ತೆ ಬದಿಯಲ್ಲಿದ್ದ ಆಲದ ಮರದ ಬಳ್ಳಿಗಳಲ್ಲಿ ನನ್ನ ಉಯ್ಯಾಲೆಯಾಡಲು ಬಿಟ್ಟು ಅಬ್ಬ ಹೋಗೋ ಬರೋ ಗಾಡಿಗಳನ್ನು ನೋಡುತ್ತಾ ಕೂತಿದ್ದಳು. “ಉಯ್ಯಾಲೆ ಆಡುತ್ತಾ ಆಡುತ್ತಾ ತಟ್ಟಂತ ಎಚ್ಚರವಾಯ್ತು, ಮೊಬೈಲಲ್ಲಿ ನಾದ ರಿಂಗಣಿಸುತ್ತಿದ್ದಳು. ಮಂಚದಿಂದೆದ್ದು ಕೂತೆ, ಅಬ್ಬ ಗೋಡೆಯ ಮೇಲಿದ್ದ ಫೋಟೋದಲ್ಲಿ ನಗುತ್ತಿದ್ದಳು, ಫೋಟೊಗೆ ನೆನ್ನೆ ಹಾಕಿದ್ದ ಹೂಮಾಲೆ ಬಾಡಿತ್ತು”.