ಡಿಪ್ಲೋಮ್ಯಾಟಿಕ್

ಮೊದಲೇ ಸರಹದ್ದುಗಳು,
ಸ್ವಾತಂತ್ರ್ಯಕ್ಕೆ ಗಂಡಾಂತರವೊಡ್ಡುವ ಗಡಿಗಳು ;
ದೇಶಗಳ ಸೃಷ್ಟಿಯಾಗಿಯಾಗಿದೆ
ಏನು ಮಾಡೋಣ ?

ದ್ವೇಷ ಹಂಚಲು ನಿಧಾನವಾಗಿಯಾದರೂ
ಪ್ರೋತ್ಸಾಹಿಸುವ ಡಿಪ್ಲೋಮ್ಯಾಟಿಕ್
ದೇಶವೆಂಬುದೇ ಅನಾಹುತಾಕಾರಿ;
ಹೇಳಿ ಪ್ರಯೋಜನವಿಲ್ಲ.

ಭಯೋತ್ಪಾದಕರು,ಅತ್ಯಾಚಾರಿಗಳು,ಕೊಲೆಗಡುಕರು
ಇಂತಹ ದೇಶವೆಂಬುದರ ಚುಕ್ಕಾಣಿ ಹಿಡಿದು ಬೊಬ್ಬಿಡುವಾಗ
ಮೆದುಳಿಲ್ಲದ,ಹೃದಯವಿಲ್ಲದ
ಭಕ್ತರು ಸಮಾಜವಾಗುವುದು ಆಶ್ಚರ್ಯವೇನಲ್ಲ.

ಭಕ್ತಿಪಂಥ , ಮೀರಾ, ಅಕ್ಕಾ
ಯಾರನ್ನು ಬೇಕಾದರೂ ಎಳೆದು ತನ್ನಿ ಪರವಾಗಿಲ್ಲ,
ಭಕ್ತರು ಗಂಡಸರು, ಮತ್ತು ಭಕ್ತಿ ಗಂಡಸಿನ ಮೇಲಷ್ಟೇ
ಎಂಬುದನ್ನು ಒತ್ತಿ ಹೇಳುತ್ತೇನೆ ನಾನು.
ಲಿಂಗೈಕ್ಯರಾಗುತ್ತಾರಂತೆ ಕೆಲವರು !
ಗಂಡು ಹೆಣ್ಣು ಅಂತಷ್ಟೇ ಮಾತನಾಡುವ ಮಂದಿ

ಅರ್ಧನಾರೀಶ್ವ ಅಂತನ್ನುತ್ತಾರೆ –
transgendre ಅಂತನ್ನಲೊಲ್ಲರು
ಬುದ್ದನನ್ನು ಗಂಡೆನ್ನುತ್ತಾರೆ
ಮನುಷ್ಯರ ನಡುವೆ ಬುದ್ದತ್ವಕ್ಕೂ ಒಂದೂವರೆ ಲಿಂಗವಷ್ಟೇ ಇದೆ…!

ಸಾವಿರಾರು ತರ ಭಾವಲೋಕದ ಸುಳಿಯಲ್ಲಿ
ತಮ್ಮೊಳಗೇ ಮುಳುಗುತ್ತಾ,
ಕೋಟ್ಯಾಂತರ ಮಂದಿ ಗಾಢ ಚರ್ಚೆಯೊಳಗೆ ಮುಳುಗಿ
ಎಲ್ಲೆಲ್ಲೋ ಹೊರಗೆ ಪಯಣಿಸುತ್ತಾ,
ಮತ್ತದೇ ಏಕ ದೈವ, ಮನುಷ್ಯ ಶ್ರೇಷ್ಟ, ವಂದೇ ಮಾತರಂ..

ರಕ್ತ ನೆಕ್ಕುವ ನರರೇ ತುಂಬಿರುವ
ಇಂತಹ ಸಂದರ್ಭದಲ್ಲಿ ದುಃಖದಿಂದಾದರೂ
ಪ್ರೇಮದ ಕುರಿತಷ್ಟೇ ಕವಿತೆ ಬರೆಯುವುದು
ಅನಿವಾರ್ಯ ಎನ್ನುತ್ತದೇ ಗೆಳತಿಯೊಬ್ಬಳ ಕವಿತೆ..

ನಿಜವಿರಬಹುದಾದರೂ,
ನರಹಂತಕರಷ್ಟೇ ಅಲ್ಲ
ಸಾಮಾನ್ಯರಾದ ನರರೂ ತುಂಬಿ ತುಳುಕಿದ್ದಾರಿಲ್ಲಿ !
ನಾವಿನ್ನೂ ಕಾಣೆಯಾಗಿರುವ ರಣಹದ್ದುಗಳನ್ನು
ಪ್ರತಿಮೆಯಾಗಿ ಬಳಸುತ್ತಿದ್ದೇವೆ..

Advertisements

ತೇಜಸ್ವಿ,ಲಂಕೇಶ್,ಓದು,ಬರಹ,ಮುಂದುವರಿಕೆ ಇತ್ಯಾದಿ…

ಈಡಿಪಸ್ ಮತ್ತು ಅಂತಿಗೊನೆ ನಾಟಕ ಓದಿದ ಮೇಲೆ – ಹೊಸತು,ಹಳತು, ಓದು ಹೇಗೆಲ್ಲಾ ಬದಲಾಗುತ್ತಿದೆ , ಬದಲಾವಣೆಗೆ ಸಾಥ್ ನೀಡುತ್ತಿದೆ ಅನ್ನೋದು ಅರ್ಥವಾದಂತಿದೆ. ನಂಬಿಕೆ,ಅಪನಂಬಿಕೆ, ಮೂಢನಂಬಿಕೆಗಳ ನಡುವೆ ಸಹಜ ಭಾವ, ಸಹಜವಾದ ಬದಲಾವಣೆ, ರಕ್ತದ ನಂಟಿಲ್ಲದ ಬಂಧಗಳು ಅಸಹನೀಯ ಅನ್ನಿಸುವಲ್ಲಿಗೆ ಬಂದು ನಿಂತಿದೆ. ಪ್ರತಿಯೊಬ್ಬನೂ ದೊರೆಯಾಗಲು ಹವಣಿಸುವ ಅಥವಾ ದೊರೆಯ ಪಾದದಡಿಯ ದೂಳಾಗುವ ಲೋಕದಲ್ಲಿ ಬದುಕು ಮರಣ ಮೃದಂಗ. ಗಂಡಿನ ದರ್ಪ, ಹೆಣ್ಣಿನ ಅಸಹಾಯಕತೆಯ ವಿಷಮಯ ವಾತಾವರಣದಲ್ಲಿ ; “ನಾನು ಅವನಲ್ಲ ಅವಳು” ಸಿನಿಮಾವಾಗಿಯಷ್ಟೇ ಉಳಿದು ಬಿಡುತ್ತದೆ ಇಲ್ಲಿ.

ರವಿ ಬೆಳಗರೆ,ಖಾಸ್ ಬಾತ್ ಗಳು,ಸಾಹಿತ್ಯದ ವಿವರಣೆ ನೀಡುವ ಜೋಗಿ ಬರಹಗಳನ್ನು ಇಷ್ಟ ಪಡುತ್ತಿದ್ದವನಿಗೆ ಅಲ್ಲಿಂದ ಹೊರ ಬರಲು ತಡವಾದದ್ದು ಗೊತ್ತಾಗಿದ್ದು ತಡವಾಗಿ. ಇನ್ನೂ ಕೂಡ ರವಿ ಬೆಳಗೆರೆ ಬರಹಗಳಲ್ಲಿ,ಉಪೇಂದ್ರನ ಸಿನಿಮಾಗಳಲ್ಲೇ ಉಳಿದು ಹೋದವರನ್ನು ನೋಡುತ್ತಲಿರುತ್ತೇನೆ.ಆತುರದ ಓಟದಲ್ಲಿರುವವರಿಗೆ Updation ಶುರುವಾದದ್ದು,ಅರ್ಧಕ್ಕೆ stuck ಆದದ್ದು,ಅಲ್ಲೇ ನಿಂತು ಕೊಳೆತದ್ದು ಅರಿವಿಗೆ ಬರುವುದಿಲ್ಲವೇನೊ ..? ಪ್ರಶ್ನೆ ನನಗೆ ನಾನೇ ಕೇಳಿಕೊಳ್ಳತ್ತಿರುವುದೂ ಹೌದು. ಅಬ್ಬನಿಗೆ ಓದಿ ಹೇಳುತ್ತಿದ್ದ ಮಹಾಭಾರತದ ಪರ್ವಗಳಿಂದ ಶುರುವಾಗಿ ಬಾಲಮಂಗಳ,ತರಂಗಗಳ ಮುಖಾಂತರ ಬಿಡಿ ಬರಹಗಳು ಮತ್ತು ಜೀವನ ಚರಿತ್ರೆಗಳನ್ನಷ್ಟೇ ಓದುತ್ತಿದ್ದ ಕಾಲವಿತ್ತು. ಕಥೆಗಳ,ಕಾದಂಬರಿಗಳ,ನಾಟಕಗಳ ಆಂತರ್ಯ ಗೊತ್ತಾಗಲು ಕವಿತೆಯ ಕಿರು ಬೆರಳು ಬೇಕಾಯಿತು.

ತೇಜಸ್ವಿ ಮತ್ತು ಲಂಕೇಶ್ ಇಬ್ಬರನ್ನೂ ಅವರ ಮರಣದ ನಂತರವೇ ಓದಲು ಶುರು ಮಾಡಿದ್ದು. ಮೊದಲಿಗೆ ಕಾಡಿದ ತೇಜಸ್ವಿಯ ಪ್ಯಾಪಿಲಾನ್ , ಲಂಕೇಶರ ಪಾಪದ ಹೂಗಳು ಮುಂದುವರಿದು ಕಾದಂಬರಿಗಳು,ಟೀಕೆ ಟಿಪ್ಪಣಿ ಗಳಾಗಿ ಓದು ಮುಂದುವರಿದಿತ್ತು. ಸಾಮಾನ್ಯನಾಗಿ ತೇಜಸ್ವಿಯ ಬಹುತೇಕ ಬರಹಗಳು ಇಷ್ಟವಾಗುತ್ತವೆ. ಸಾಮಾನ್ಯರಂತೆಯೇ ವಿಜ್ಞಾನದ ಬಗ್ಗೆ,ಪ್ರಕೃತಿ ಪ್ರಪಂಚದ ಬಗ್ಗೆ ಕುತೂಹಲಿಯಾಗಿ ಬರೆಯುವ ತೇಜಸ್ವಿಯ ಬರಹಗಳು ಲಂಕೇಶರಷ್ಟು ವಿಶಾಲ ದೃಷ್ಟಿಕೋನದವೇ..? ನನ್ನ ಓದಿನ ಮಿತಿಯಲ್ಲಿ ಹಾಗನಿಸುತ್ತಿಲ್ಲ. ಸಂಗ್ರಹಿತ ವಿಷಯಗಳ ಸರಳ ಬರಹಗಳ ತೇಜಸ್ವಿಗೆ ತನ್ನ ಅಕ್ಕಪಕ್ಕದಿಂದ ಶುರುವಾಗಿ ಅಲ್ಲೇ ಮುಗಿಯುವ ವಿಮರ್ಶಾ ಬರಹಗಳಾಚೆಗೂ ಎಲ್ಲವನ್ನೂ observe ಮಾಡುವ ತಾದ್ಯಾತ್ಮತೆಯಿದೆ. ಅಜ್ಜಿಕಥೆಗಳಷ್ಟೇ ಆಪ್ತವಾಗಿ ಮತ್ತು ಆಕರ್ಷಣೀಯವಾಗಿ ಬರೆಯುವ ತೇಜಸ್ವಿ ಬರಹ ಲಂಕೇಶರಿಗಿಂತ ಮೆದು ಅನ್ನಿಸಿ ಇಷ್ಟವಾಗಬಹುದು.ಹೊರಗಿನದನ್ನು ನೋಡುವಾಗಿನ ಲಂಕೇಶರ ಒಳನೋಟ ತೇಜಸ್ವಿಗಿಂತ ಭಿನ್ನ ಮತ್ತು ಪ್ರಖರ. Main line ಗೆ ಬರದ ಹಲವಾರು ಪ್ರಾಮಾಣಿಕ ಬರಹಗಾರರನ್ನು,ಅನುವಾದಗಳನ್ನು ಓದೋದಿನ್ನೂ ಬಾಕಿಯಿದೆ. ಎಲ್ಲಕ್ಕೂ ಅಂಟಿಕೊಂಡಿರುವ ಗಂಡಿನ ಶ್ರೇಷ್ಠತೆಯ ಕೊಳಕನ್ನು ತೊಡೆದು ಮಹಿಳೆಯರ,ದ್ವಿಲಿಂಗಿಗಳ,ಸಲಿಂಗಿಗಳ ಬರಹಗಳು ಆವರಿಸಲೆಂಬ ಆಸೆಯಿದೆ. ಸದ್ಯಕ್ಕೆ ಅಬಚೂರಿನ ಪೋಸ್ಟಾಪೀಸ್ನ ಕಥೆಗಾರನಾದ ತೇಜಸ್ವಿ ಹಾಗೂ ನಾಟಕಕಾರ ಲಂಕೇಶ್ ಇಷ್ಟವಾಗ್ತಿದ್ದಾರೆ.

ಅಬಚೂರಿನ ಪೋಸ್ಟಾಪೀಸ್ ಸಂಕಲನದ ಎಲ್ಲಾ ಕಥೆಗಳು ಇಷ್ಟವಾಗುವಂತವು. ನಮ್ಮಗಳ ಕುಟುಂಬ ಮತ್ತು ಅದರ extension ತರ ಬೆಳೆದಿರುವ ಸಮಾಜದ ಪಡಿಪಾಟಲು,ಗೊಂದಲ ಮತ್ತು ಚಪಲಗಳ ಕಸರತ್ತುಗಳೇ ಇಲ್ಲಿನ ‘ತುಕ್ಕೋಜಿ’, ‘ಅಬಚೂರಿನ ಪೋಸ್ಟಾಪೀಸ್’ ಮತ್ತೆಲ್ಲಾ ಕಥೆಗಳು. ‘ಕುಬಿ ಮತ್ತು ಇಯಾಲ’,’ತ್ಯಕ್ತ’,’ತಬರನ ಕಥೆ’ ತೀರ ಆಲೋಚನೆಗೆ ಹಚ್ಚಿದ ಕಥೆಗಳು.

ತಬರನ ಕಥೆಯ ತಬರನ ಪಾತ್ರ ಆ ಕಥೆ ಬರೆದಿರಬಹುದಾದ ಕಾಲದ ಹಿಂದಕ್ಕೂ, ಮುಂದಕ್ಕೂ ನಮ್ಮದೇ ರಾಜಕೀಯ,ಸಾಮಾಜಿಕ ಚರಿತ್ರೆಗಳ ಪುನರಾವರ್ತನೆ ತರ ಆವರಿಸುತ್ತೆ. ಇವತ್ತಿಗೂ ಸರಕಾರಿ ಕಚೇರಿಗಳನ್ನು ಹತ್ತಿ ಇಳಿದು ಸವೆದ ಚಪ್ಪಲಿಯಲ್ಲಿ ಸ್ಮಾರಕವಾಗಿ ಅಳಿದು ಹೋದವರೆಷ್ಟೋ..? ಜಾತಿಪದ್ದತಿಯ ಅಸಹ್ಯದಿಂದ ವಿಶಾಲವಾದ ಬಡವ ಬಲ್ಲಿದನ ನಡವಿನ ಅಂತರ, ದೊರೆ ಮತ್ತು ಸೇವಕ ಎಂಬಂತಾಗಿತ್ತು. ಪ್ರಜಾಪ್ರಭುತ್ವದ ನಂತರ ಅದು ಸರಕಾರವಾಗಿ ದುಡ್ಡು ಅಕ್ಷರ ಎರಡೂ ಇಲ್ಲದವರು ಸರಕುಗಳಂತಾಗಿದ್ದನ್ನು ‘ತಬರ’ ಕಣ್ಣ ಮುಂದೆ ತರುತ್ತಾನೆ.

ಡಾಕ್ಟರ್ ಕುಬಿ ತನ್ನ ಸುತ್ತಲೂ ಪಸರಿಸುತ್ತಿರುವ ವಿಷ ಕಾಣುವುದು, ಸುತ್ತ ಮುತ್ತಲಿನ ಮನುಷ್ಯರಿಗೆ ಆಗುವ ವಿಷಮಗಳಿಗೆಲ್ಲ ಸ್ಪಂದನೆಯ ಚಿಕಿತ್ಸೆ ಬೇಕಾಗಿರುವುದನ್ನು ಮನಗಂಡಿರುವ ವೈದ್ಯ. ಸರಿತಪ್ಪುಗಳ ನಡುವೆ ರೋಗಿಗಳನ್ನೇ ವೈದ್ಯರನ್ನಾಗಿಸಲು ಶ್ರಮಿಸುತ್ತಿರುವಂತೆ ಕಾಣುತ್ತಾನೆ. ಒಳ್ಳೆಯವರು ಎಂದು ತಮ್ಮನ್ನು ತಾವೇ ನಂಬಿಸಿಕೊಂಡಿರುವ ಜನ ಸಮುದಾಯದ hypocrisy ಗಳಿಂದ ಬೇಸತ್ತು ಹೋದವರ ಸಂಗಾತಿಯಂತಿರುವಾತ. ಸಮಾಧಾನ ಹಂಚಲು ಶ್ರಮಿಸುವವರನ್ನು ದೇವರನ್ನಾಗಿಸುವ ಊರವರ ಅಂಧತೆಗೆ ಮದ್ದು ಮಾಡಲರಿಯದ ಕುಬಿ ಅಸಹಾಯಕ ಸಮಾಜ ಸೇವಕ . ಇಯಾಲಳಂತವರ ಮುಗ್ಧತೆಯಲ್ಲಿ, ಸಾವಿನಲ್ಲಿ ಕರಗುವ ಸ್ಮಶಾನ ಪಾಲಕ. ಮುಗ್ದತೆಯೆಂದರೆ ಮುಖದಲ್ಲಿನ ಒಂದು ಭಾವ ಅಂದುಕೊಂಡು ಒಳಗನ್ನು ಅರಿಯದವರ ಕಂಡು ಮರುಗುವಾಗ, ಅದೆಷ್ಟೋ ಸಾವುಗಳನ್ನು ಕಂಡ ವೈದ್ಯಗಣ್ಣಿಗೆ ಕಾಣಿಸದ್ದು ಕಾಣಿಸುತ್ತದೆ.

ಹೊಲಿಯುತ್ತಾ ಬಿಚ್ಚುತ್ತಾ ಬಟ್ಟೆಯನ್ನು,ಬದುಕನ್ನೂ ಸಹನೀಯವಾಗಿಸುವುದು ಹೇಗೆನ್ನುವುದರ ಹುಡುಕಾಟದ ನಡುವೆಯೇ ಮೂರಾಬಟ್ಟೆಯಾಗುವ ಹಂತಕ್ಕೆ ಹೋಗುವ ಸಂಬಂಧಗಳು. ಸಂಬಂಧಗಳ ಒತ್ತಾಯದ ಜೋಡಣೆಯ ಅನಿವಾರ್ಯತೆಯನ್ನು ಮನುಷ್ಯ ಸೃಷ್ಟಿಸಿಕೊಂಡಿದ್ದಾರು ಏಕೆಂಬುದೇ ಪ್ರಶ್ನೆ. ತುಕ್ಕೋಜಿ ಕಥೆಯ ಅಂತ್ಯ ಮನುಷ್ಯರಿಗೆ ಮನುಷ್ಯರ ಮೇಲಿನ ನಂಬಿಕೆ ಅಪನಂಬಿಕೆಗಳ ನಡುವಿನ ತೊಯ್ದಾಟದಂತಿದೆ.

ಆಲನ ಹಳ್ಳಿ ಕೃಷ್ಣ ಬರೆದ ‘ಕಾಡು’ ಕಾದಂಬರಿ ಕಿಟ್ಟಿ ಅನ್ನೋ ಹುಡುಗನ ಕಣ್ಣಿಂದ ನೋಡಲ್ಪಟ್ಟಿದ್ದರೇ, ‘ತ್ಯಕ್ತ’ ಕಥೆ ಕಿಟ್ಟಿಯನ್ನೇ ನೋಡುತ್ತದೆ. ಪ್ರತ್ಯುತ್ತರವನ್ನು ಅರಗಿಸಿಕೊಳ್ಳಲಾಗದ ಬುದ್ಧಿವಂತ ದೊಡ್ಡವರ ಮನೆಯಲ್ಲಿ ವ್ಯಕ್ತ-ಅವ್ಯಕ್ತಗಳ ನಡುವಿನ ನಡಿಗೆ. ನಿಂತಲ್ಲಿಯ ಚಲನೆ,ಚಲನೆಯ ನಡುವಿನ ನಿಲ್ದಾಣ. ಭಾವ ಮತ್ತು ಅಲೌಕಿಕತೆಯ ಅಭಾವವೇ ತ್ಯಕ್ತ.

ಮಾಂಟೋ ಕಥೆಗಳ ಮೂಲಕ,ತಬರನ ಮೂಲಕ ಹಿಂದಕ್ಕೆ ಚಲಿಸುತ್ತಿರುವಾಗ… ಬರೆದದ್ದನ್ನು,ಓದಿದ್ದನ್ನೂ ತ್ಯಜಿಸಿ ಮುಂದೆ ಹೋಗ ಬೇಕಾದ ಕಾಲ ‘ತ್ಯಕ್ತ’ದಂತಹ ಕಥೆಗಳಿಂದ ಮತ್ತೆ ಮತ್ತೆ ಶುರುವಾಗುತ್ತಲಿರುತ್ತದೆ. Observe,Grasp,fight,leave and live..

ಪ್ರೇಮ ಪಯಣದಲಿ ಜ್ಞಾನವಿದೆ, ಹೆಡ್ಡತನವೂ! ~ ಸೂಫಿ ಅತ್ತಾರ್ ನಿಶಾಪುರಿ ಪದ್ಯ

ಪ್ರೇಮ ಪಯಣದಲಿ
ಜ್ಞಾನವಿದೆ, 
ಹೆಡ್ಡತನವೂ!
ಒಂದೇ ಯಾನದಲಿ ನಾನು
ಜ್ಞಾನಿಯಾದೆ, ಹೆಡ್ಡ ಕೂಡಾ

ಫರೀದುದ್ದೀನ್ ಅತ್ತಾರ್ ಪದ್ಯ – ಚೇತನಾ ತೀರ್ಥಹಳ್ಳಿ ಅನುವಾದದಲ್ಲಿ

ಅರಳಿಮರ

attar

ಮೂಲ: ಫರೀದುದ್ದೀನ್ ಅತ್ತಾರ್ (ಅತ್ತಾರ್ ನಿಶಾಪುರಿ) | ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಳೆದು ನನ್ನೊಳಗೆ,
ಮತ್ತೆ ಮೂಡಿದೆ,
ಎಲ್ಲೆಂದು ಅರಿವಿಲ್ಲ ನನಗೆ.

ಕಡಲಿಂದ ಸಿಡಿದು,
ಮರಳಿ ಕರಗಿದ
ಚಿಕ್ಕ ಹನಿ ನಾನು.

ಹಗಲಲ್ಲಿ ಹುಟ್ಟಿ ಬೆಳೆದೆ,
ಬಿಸಿಲಲ್ಲಿ ಕುಬ್ಜವಾದೆ,
ದಿನಾಂತದಲಿ ತೀರಿ ಹೋದೆ;
ಬರಿಯದೊಂದು ನೆರಳು ನಾನು.

ತಿಳಿದಿಲ್ಲ ನನಗೆ
ನಾನು ಬಂದ, ಇದ್ದ, ಹೊರಟುಹೋದ
ಯಾವುದೇ ಸುದ್ದಿ.
ನಡೆಯಿತೆಲ್ಲ, ಒಂದುಸಿರಿನ ಘಳಿಗೆಯಲಿ!

ಮುಂಬತ್ತಿಯ ಬೆಳಕಲ್ಲಿ
ಉತ್ತರಗಳ ಮರೆತಿರುವೆ;
ಕೇಳಬೇಡಿರೇನೂ ನನ್ನ,
ಚಿಟ್ಟೆಗಳ ಕುರಿತು.

ಪ್ರೇಮ ಪಯಣದಲಿ
ಜ್ಞಾನವಿದೆ,
ಹೆಡ್ಡತನವೂ!
ಒಂದೇ ಯಾನದಲಿ ನಾನು
ಜ್ಞಾನಿಯಾದೆ, ಹೆಡ್ಡ ಕೂಡಾ!!

ಕಣ್ಣಾಗಬೇಕು,
ಕಾಣಬಾರದು ಏನನ್ನೂ
ನೋಟ ನಿಲುಕುವುದು
ಕಣ್ಮುಚ್ಚಿದರೆ ಮಾತ್ರ.

ಉನ್ಮತ್ತ ಅಲೆದಾಟದಲಿ ದಣಿದಿರುವನು
ಅತ್ತಾರ್;
ಎರಡು ಲೋಕಗಳ ಮೀರಿ
ಬೆಳೆದ ಹೃದಯ ವೃಕ್ಷದಡಿ
ಪ್ರೇಮದ ಅಮಲೇರಿ ಕುಳಿತಿಹನು.

ಇಲ್ಲವೆಂದರೆ ಲೋಕ ಹುಡಿ ಬೀಳಲಿ
ಅವನ ತಲೆಯ ಮೇಲೆ!!

View original post

ಗಝಲ್ ತರದ್ದು

ಯಾವ ಆಕರ್ಷಣೆಯೂ ಸೋಜಿಗವಲ್ಲ ನನಗೆ, ನಿನ್ನ ಹೊರತಾಗಿ
ಯಾವ ವೇದನೆಯಲ್ಲೂ ನಿವೇದನೆಗಳಿಲ್ಲ ನನಗೆ, ನಿನ್ನ ಹೊರತಾಗಿ

ಮದಿರೆ ಹಲವು ವಿಧವಾಗಿ ಹರಿಯುತ್ತದೆ ನನ್ನೊಳಗಿಂದಲೇ
ಯಾವ ನಶೆಯೂ ನನ್ನ ಹರಿಯ ಗೊಟ್ಟಿಲ್ಲ, ನಿನ್ನ ಹೊರತಾಗಿ

ಪ್ರೇಮವೆಂಬುದು ಚೂರು ಚೂರಾಗಿ ಕವಿತೆಗಳಾಯಿತು
ಯಾವ ಕವಿತೆಯು ನಾನಾಗಲಿಲ್ಲ, ನಿನ್ನ ಹೊರತಾಗಿ

ಮಾತುಗಳ ಜಂಜಡದಿಂದ ದೂರಾಗಿ ಅದ್ಯಾವುದೋ ಕಾಲವಾಯಿತು
ಯಾರ ಮೌನವೂ ನನ್ನ ಕಂಗೆಡಿಸಿಲ್ಲ, ನಿನ್ನ ಹೊರತಾಗಿ

ಲೋಕದ ಸಹವಾಸ ತೊರೆಯುವುದು ಹೇಗೋ ಗೊತ್ತಾಗುತ್ತಿರಲಿಲ್ಲ
ಲೋಕವೆಂಬುದೇ ಇಲ್ಲವೆಂದು ಗೊತ್ತಾಯಿತೀಗ, ನಿನ್ನ ಹೊರತಾಗಿ

~~~~~

ನಾನು ನಾನಾಗಿರುವುದು ಮತ್ತು ನಾನು ನೀನಾಗಿರುವುದು ಎರಡೂ ಬೇರೆಯಲ್ಲ
ದೃಷ್ಟಿಗೆ ಗೋಚರಿಸುವುದು ಮತ್ತು ಕಣ್ಣು ಕುರುಡಾಗಿರುವುದು ಎರಡೂ ಬೇರೆಯಲ್ಲ

ಮಳೆಗೆ ತೊಯ್ದು ಹರಿಯುವ ಕೂದಲು, ಝರಿಯ ನಡುವಿನ ಕುರುಚಲುಗಳಂತೆ
ಕೊಡೆಯಿಂದ ಉದುರುವ ನೀರು ಮತ್ತು ನನ್ನ ಕಣ್ಣೊಳಗಿನ ನೀನು ಎರಡೂ ಬೇರೆಯಲ್ಲ

ಸ್ನಾನದ ಮನೆಯೊಳಗಿನ ಹಬೆ, ನೀರು ಬಿಸಿಯಾಗುವ ಹೊಗೆಗಿಂತ ಎಷ್ಟು ಭಿನ್ನ ?
ಬತ್ತಿದ ಆಳದ ಬಾವಿ ಮತ್ತು ಅಳದೇ ಕಟ್ಟಿದ ಉಸಿರು ಎರಡೂ ಬೇರೆಯಲ್ಲ

ಕೊಳದಲ್ಲಿ ಬಿದ್ದು ಒದ್ದೆಯಾದ ಚಂದಿರನ ಒಣಗಿಸಿ ಮಳೆಯಾಗುವುದು ಸೂರ್ಯ
ಒತ್ತರಿಸಿ ಬರುವ ದಾಹ ಮತ್ತು ತಡೆಹಿಡಿಯಲಾಗದ ಮೂತ್ರ ಎರಡೂ ಬೇರೆಯಲ್ಲ

ತುಂಬಿದ ಮಧುಶಾಲೆಯ ಮಾಸ್ತರನಂತೆ ಕಾಣಿಸುವ ಖಾಲಿ ಶೀಷೆ ಉಮರ್ ಖಯಾಮ
ಕುಡಿಯುವ ಮೊದಲಿನ ನಶೆ ಮತ್ತು ಕುಡಿದ ಮೇಲಿನ ರುಬಾಯತ್ ಎರಡೂ ಬೇರೆಯಲ್ಲ

ಎಲ್ಲವನ್ನೂ ನುಂಗುವ ನೀರನ್ನು ಕುಡಿದು ಸುಮ್ಮನೆ ಮಲಗುವುದು ಅನಿವಾರ್ಯ
ನಿದ್ದೆಯಲ್ಲಿ ಹರಿದ ಜೊಲ್ಲು ಮತ್ತು ಮರಣದಲ್ಲಿ ನೆರೆದ ನೊರೆ ಎರಡೂ ಬೇರೆಯಲ್ಲ

~~~~~~~~~~~~

ಬಿಟ್ಟರೂ ಬಿಡದ ಈ ಬೇಜಾರುಗಳನ್ನು ಕೊಲ್ಲುವ ಬಗೆ ಯಾವುದು?
ಮತ್ತೆ ಮತ್ತೆ ಸಾಯಿಸುವ ನೆನಪಿಂದ ಪಾರಾಗುವ ಬಗೆ ಯಾವುದು?

ಸರಸ, ವಿರಸಕ್ಕೆ ಅಲ್ಪವಿರಾಮ ಹಾಕಿ ರೋಮಾಂಚನ ಗೊಳಿಸುತ್ತದೆ
ನೋವಾಗದ ಹಾಗೇ ಹೃದಯ ಹೊಲಿಯುವ ಬಗೆ ಯಾವುದು?

ಬೆರಳುಗಳು ಚಲಿಸುವಾಗ ಬೆನ್ನಮೇಲೆ, ಮುದಗೊಳ್ಳುತ್ತದೆ ಬೆನ್ನಮೂಳೆ
ಬಳಲಿ ಬೆಂಡಾದ ಎದೆಗೂಡನ್ನು ಉದ್ದೀಪಿಸುವ ಬಗೆ ಯಾವುದು ?

ಎಲ್ಲಾ ಬೇಲಿಯನೂ ದಾಟಿ ಮೈದಾನದಲ್ಲಿ ಭೇಟಿಯಾಗುತ್ತಾರೆ ಕೆಲವರು
ಮೈದಾನದ ವೃತ್ತವನ್ನೂ ಮೀರಬೇಕಿದೆ, ಅರ್ಥೈಸುವ ಬಗೆ ಯಾವುದು?

ಕಾಮನಬಿಲ್ಲು ಮೂಡಲು ಕಾನೂನಿನ ಕಟ್ಟಪ್ಪಣೆ ಬೇಕಿಲ್ಲಿ
ಮೈಮನಸ್ಸಿಗೆ ಅಣೆಕಟ್ಟು ಕಟ್ಟುವ ಮನುಷ್ಯ ಕುಲವ ಕೊನೆಗಾಣಿಸುವ ಬಗೆ ಯಾವುದು ?

ಕಾಗದ

ಬಿದಿರ ನೋವ ಪದವ ಹೊತ್ತು
ಹಾರುತಿಹುದು ಖಾಲಿ ಖಾಲಿ ಕಾಗದ
ಉದರದಲ್ಲಿ ಉರಿಯುತಿರುವ ಪದಗಳ
ಸದ್ದು ಮರೆತ ಅಧರಗಳು ಗದ್ಗದ

ಉಬುಕಿ ನಿಂತ ಕಂಠದಲ್ಲಿ
ಬಿಕ್ಕಳಿಕೆಗಳು ಬಂಧಿ
ಸುರುಳಿ ಸುರುಳಿ ಕರುಳ ನಾದ
ಅಕ್ಷರಗಳ ಸರಪಳಿ
ನರಳುತಿರುವ ಕಾಗದ..

ನೋವ ಹೂವ ಮಾರುವವರ ಧಾವಂತ
ಕಾಡೋ ಕನಸ ಕೊಳ್ಳಲೇನು ತರಾತುರಿ

ಗುಜುರಿ ಅಂಗಡಿ ತ್ರಾಸಿನಲ್ಲಿ
ಒಂಟಿತನದ ಮೂಟೆ ಹೊತ್ತ
ಗುಂಪು ಗುಂಪು ಕಾಗದ..

ನನ್ನೊಬ್ಬನದೆ ಅಲ್ಲ..

ಕಂಪ್ಯೂಟರ್ ನೋಡುತ್ತಾ
ತಲೆ ಝಂ ಎನ್ನುತ್ತದೆ.
ತಲೆಯೊಳಗಿಂದ ಮೆದುಳು ಪೇರಿಕಿತ್ತು
ಅದ್ಯಾವ ಕಾಲವಾಯಿತೋ

ಮನೆಯ ಹೆಣ್ಣು ನಾಯಿಯ
ಹೆಣ್ಣು ಮರಿಗಳನ್ನು
ಬೇರೆ ಬೀದಿಗೆ ಬಿಟ್ಟು ಬರುವಾಗ
ಚೂರು ಚೂರೇ ಹೃದಯವನ್ನು
ಎಲ್ಲಾ ಮರಿಗಳಿಗೂ ಹಂಚಿ ಬಂದಿದ್ದೇನೆ

ಪಂಚೇಂದ್ರಿಯಗಳನ್ನು ಆಳಿದ
ಹಸಿವು ಮರೆಯಾಗಿದೆ
ಕೈಗಳು ಕೊಡಲಿಯಾಗಿವೆ
ಬೆದರಿದ ನಿದಿರೆಯ ಮಡಿಲಲಿ
ಕಟ್ಟಿಗೆಯಂತ ಕಾಲುಗಳು ಉರಿಯುತ್ತಿವೆ

ನರ ನಾಡಿಗಳಿಂದ ನಾಡು ನುಡಿಗಳಿಂದ
ಹರಿವ ಕೆಂಪು ಹೊಳೆಯಲಿ
ಕರಗಿ ಕರಗಿ ಬೋಳಾದೆ
ಬೋಳೆತನದ ದಿವ್ಯಾನುಭವ
ನನ್ನೊಬ್ಬನದೆ ಅಲ್ಲವೀಗ..

ಯಾಕೀಗೆ..?

ಭಿನ್ನತೆಯನೊತ್ತ ಭಿನ್ನವಾದ ಡಿ ಎನ್ ಎ
ಜೀವದೊಳಗಿನ ಕೆಮಿಕಲ್ ಎಫೆಕ್ಟ್
ತಿಳುವಳಿಕೆಯಾಚೆಗೆ ತಳಮಳಗಳು

ಸಾಲು ಸಾಲು ಹಗಲುಗಳು
ಕಣ್ಣು ಒದ್ದೆಯಾಗಿಸುವ ಬೆಳಕುಗಳೆಲ್ಲಾ
ಯಾಕೆ ರಾತ್ರಿ ಹೊತ್ತೇ ಕಾಣಿಸುತ್ತವೆ..?

ವಿಜ್ಞಾನದ ವಾಸ್ತವವ ಅಪ್ಪಿಕೊಂಡು
ಸೂಕ್ಷ್ಮತೆಯ ಸೂಕ್ಷ್ಮ ದರ್ಶಕವ ಧರಿಸಿ
ಹುಟ್ಟಬಾರದ
ಹುಟ್ಟಿಸಬಾರದ
ಮನುಷ್ಯ ಜನ್ಮದ ಬಗ್ಗೆ ಒಳ ನೋಟ ಬೀರುವಾಗಲೂ
ಯಾವುದೋ ಬಳ್ಳಿ ಮೈತುಂಬ ಹರಡಿ
ಹೊದಿಕೆಯ ಕಿತ್ತೆಸೆಯುತ್ತಿದೆ..

ಸುತ್ತಲಿನವರನ್ನೆಲ್ಲಾ ಕಡೆಗಣಿಸಿ
ಮೆತ್ತನೆ ನುಡಿಗಳನ್ನೆಲ್ಲಾ ಮರೆಯಿಸಿ
ಯಾಕೆ..
ಅತಿ ಕಿರಿದಾದ ನೆನಪಿನ ಓಣಿ
ಹಂಚಿಕೆ, ಸಾಂತ್ವನ ಬಯಸುವ ಬೇಸರಗಳೆಲ್ಲಾ
ಒಂಟಿ ನಿಶ್ಯಬ್ದದ ಮೇಲೆ ಸವಾರಿ ಮಾಡುತ್ತವೆ..?

ಯಾಕೀಗೆ..?