ನಿಜದ ರುಚಿ

ಪ್ರೇಮದ ನಾಲಗೆಯ ಚಾಚಿ
‘ನಿಜ’ದ ರುಚಿಯ ಪಸರಿಸಿದ ಜೀವವೇ
ಮಗುವಿನಂದಿ ತೊದಲುತಿರಲು ನೀನು
ಮಗವಿನ ಎಂಜಲೇ ಆಗಿ ಹೋದೆನು ನಾನು

ಹಡೆದ ಅಮ್ಮನಂತ ಕಂದ ನೀನು
ಎಳೆಯ ಪಾದವನೊತ್ತಿ ನಡೆದೆಯೇನು
ಎಳಸು ಕಾಯಿಯಂತ ಹೃದಯ
ಮೊಗ್ಗು ಮಾಗಿ ಹೂವಾಯಿತು ನೋಡು

ಕಣ್ಣು ಕಣ್ಣು ಸಂಧಿಸದೇ ಹೋದರೇನು
ಹೆಜ್ಜೆ ಗೆಜ್ಜೆಯಲ್ಲಿ ಎದೆಯ ನಾದ ಹೊಮ್ಮಿತಲ್ಲ
ಮೌನ ಒರತೆಯಾಗಿ ಪಲ್ಲವಿಸಿದ ಆದ್ಯ ಗಾನ
ಸುಪ್ತನದಿಯು ಪ್ರಣಯ ಚರಣವಾಯಿತು

ನಿತ್ಯ ಮತ್ತ ಉಲಿಯುವಾಗ ತುಟಿಗಳು
ಚಿಟ್ಟೆ ಹಾರುತಿಹುದು ಮನದ ತೋಟದಿ
ಜಗವೇ ಒಂದು ಹೂದೋಟವಾಗಲು
ಸಂಚು ಕಣ್ಣ ಹೂಗಳಾದೆವು ನಾವ್ಗಳು